ಪುಣ್ಯಸ್ತ್ರೀ ಕಾಳವ್ವೆ : -

ಸು. 1180. ಬಸವಾದಿ ಪ್ರಮಥರ ಕಾಲದಲ್ಲಿ ಜೀವಿಸಿದ್ದ ಪ್ರಸಿದ್ಧ ವಚನಕಾರ್ತಿ, ಶಿವಾನುಭವಿ, ಶರಣಮಾರ್ಗಾನುಯಾಯಿ. ಉರಿಲಿಂಗ ಪೆದ್ದಿಯ (ನೋಡಿ- ಉರಿಲಿಂಗ-ಪೆದ್ದಿ) ಹೆಂಡತಿ. ಉರಿಲಿಂಗ ಪೆದ್ದೆಗಳರಸ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾಳೆ. ಆಂಧ್ರ ಪ್ರದೇಶದಿಂದ ಬಂದು ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಕಂಧಾರ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಈಕೆಯ ಪತಿ ಪೆದ್ದಯ್ಯ ಕುಪ್ರಸಿದ್ಧ ಕಳ್ಳ. ಉರಿಲಿಂಗದೇವನ (ನೋಡಿ- ಉರಿಲಿಂಗ-ದೇವ) ಪ್ರಭಾವದಿಂದ ಶರಣನಾಗಿ ಉರಿಲಿಂಗ ಪೆದ್ದಿಯಾದ. ಪತಿಯನ್ನನುಸರಿಸಿ ಈಕೆಯೂ ಶರಣೆಯಾದಳು. ಈಕೆ ಹನ್ನೆರಡನೆಯ ಶತಮಾನದ ಸುಪ್ರಸಿದ್ಧ ವಚನಾಕಾರ್ತಿಯರಿಗೆ ಸರಿಮಿಗಿಲೆನಿಸುವಂತೆ ವಚನಗಳನ್ನು ರಚಿಸಿರುವುದಲ್ಲದೆ ತನ್ನ ಪತಿಯ ಜೊತೆಯಲ್ಲಿ ಶಿವಾನುಭವ ಪ್ರಚಾರ ಕಾರ್ಯದಲ್ಲಿ ನಿರಂತರ ನೆರವಾದವಳು. ಅಸ್ಪøಶ್ಯರೆನಿಸಿದ್ದ ಈ ಸತಿ ಪತಿಯರು ಶಿವಾನುಭವವನ್ನು ಪಡೆದ ಮೇಲೆ ಶ್ರೇಷ್ಠ ಜ್ಞಾನಿಗಳೆನಿಸಿಕೊಂಡರು. ಈಕೆ ರಚಿಸಿರಬಹುದಾದ ಎಲ್ಲ ವಚನಗಳೂ ಸಿಕ್ಕಿಲ್ಲ. ಸಿಕ್ಕಿರುವ ಕೆಲವೇ ವಚನಗಳಲ್ಲಿ ಕಾಣುವ ಪಾಂಡಿತ್ಯ, ಅನುಭವ, ನಿಷ್ಠೆ, ತತ್ತ್ವಜ್ಞಾನದ ತಿಳಿವಳಿಕೆಗಳೂ ಗೃಹಿಣಿಯಲ್ಲಿರಬೇಕಾದ ಸದ್ಗುಣಗಳ ವಿವರಗಳೂ ಈಕೆಯನ್ನು ಶ್ರೇಷ್ಠ ವಚನಕಾರ್ತಿಯಾಗಿಸಿವೆ. ಹನ್ನೆರೆಡನೆಯ ಶತಮಾನದಲ್ಲಿ ಕಾಣುವ ಅಪೂರ್ವ ಸತಿಪತಿ ಜೋಡಿಗಳಲ್ಲಿ ಇವರದೂ ಒಂದು.

೧‌.ತುಮರಿಯ ಕೊಳ್ಳಿಯಂತೆ ಉರಿವಾತ ಭಕ್ತನೆ.   ೨.ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ.      
೩.ಸತ್ಯ ಶುದ್ಧವಿಲ್ಲದದು ಕಾಯಕವಲ್ಲ.    
೪.ವ್ರತವೇ ಮುತ್ತು ರತ್ನ.               ಈಕೆಯ ವಚನಗಳಲ್ಲಿ ಬರುವ ಇಂಥ ಮಾತುಗಳು ಸಾಹಿತ್ಯದ ಕಾಂತಿಯಿಂದ ಮಿನುಗುತ್ತವೆ.

 

(ಜೆ.ಎಸ್.ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ